ರಿಕ್ಟರ್, ಬರ್ಟನ್
1931-. ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೌತವಿಜ್ಞಾನಿ. ಹೊಸ ಬಗೆಯ, ಭಾರ ಮೂಲಕಣವೊಂದರ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಿಕ (1976) ಪಡೆದವ. ನ್ಯೂಯಾರ್ಕಿನಲ್ಲಿ  1931ರಲ್ಲಿ ಜನಿಸಿದ. 1948ರಲ್ಲಿ ಮೆಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟಿಕ್ನಾಲಜಿ (ಎಂಐಟಿ) ಸೇರಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ (1952) ಮತ್ತು ಭೌತವಿಜ್ಞಾನದಲ್ಲಿ ಡಾಕ್ಟೊರೇಟ್ ಪದವಿ (1956) ಪಡೆದ. ಎಂಐಟಿಯಲ್ಲಿದ್ದಾಗ ಮುಂದೆ ರಸಾಯನವಿಜ್ಞಾನವೇ ಭೌತವಿಜ್ಞಾನ  ಎಂದು ನಿರ್ಧರಿಸಲಾಗದಿದ್ದಾಗ ಅಲ್ಲಿಯ ಪ್ರಾಧ್ಯಾಪಕ ಫ್ರಾನ್ಸಿಸ್ ಫ್ರೀಡ್‍ಮನ್ ಎಂಬಾತನ ಸಲಹೆ ಮೇರೆಗೆ ಭೌತವಿಜ್ಞಾನ ಅಧ್ಯಯನವನ್ನೇ ಕೈಗೊಂಡ.

ಮೂಲಕಣಗಳನ್ನು ಕುರಿತ ಆಸಕ್ತಿ ಮುಂದೆ ಇವನನ್ನು ಸ್ಟ್ಯಾನ್‍ಫರ್ಡ್ ವಿಶ್ವವಿದ್ಯಾಲಯದ ಅಧಿಕ-ಶಕ್ತಿ ಭೌತಪ್ರಯೋಗಾಲಯ ಪ್ರವೇಶಿಸುವಂತೆ ಮಾಡಿತು. ಅಲ್ಲಿ ಎಲೆಕ್ಟ್ರಾನ್-ದಾಸ್ತಾನು ಉಂಗುರಗಳ ಮೊದಲ ಜೋಡಿಯ ರಿಂಗ್ (ಫಸ್ಟ್ ಪೇರ್ ಆಫ್ ಎಲೆಕ್ಟ್ರಾನ್-ಸ್ಟೋರೇಜ್‍ರಿಂಗ್ಸ್) ಯಂತ್ರ ನಿರ್ಮಿಸುವ ತಂಡದ ಸದಸ್ಯನಾದ. ಕ್ವಾಂಟಮ್ ಎಲೆಕ್ಟ್ರೊಡೈನ ಮಿಕ್ ಸಿದ್ಧಾಂತದ ಸಿಂಧುತ್ವ ಅಧ್ಯಯಿಸಲು ನೆರವಾಗುವ ಮತ್ತು ಪರಸ್ಪರ ಡಿಕ್ಕಿ ಹೊಡೆಯುವ ತೀವ್ರ ಸಾಮಥ್ರ್ಯಯುತ ಕಣಗಳ ಉತ್ಪಾದನೆ ಈ ಯಂತ್ರದಲ್ಲಿ ಸಾಧ್ಯವಾಗಿತ್ತು. 1960ರಲ್ಲಿ ಈತ ಸ್ಟ್ಯಾನ್‍ಫರ್ಡ್ ಪಾಸಿಟ್ರಾನ್-ಎಲೆಕ್ಟ್ರಾನ್ ಆಕ್ಸಿಲರೇಟಿಂಗ್ ರಿಂಗ್ ಯಂತ್ರವನ್ನು ಆಲೇಖಿಸಿದ. ಮತ್ತಷ್ಟು ಅಧಿಕಶಕ್ತಿಯ ಕಣಗಳ ಡಿಕ್ಕಿಗಳನ್ನು ಉಂಟುಮಾಡಬಲ್ಲ ಸಾಮಥ್ರ್ಯ ಇದಕ್ಕಿತ್ತು. ಈತ ಮತ್ತು ಇವನ ಸಹಕಾರ್ಯಕರ್ತರು ಈ ಯಂತ್ರ ಬಳಸಿ 1974ರ ನವೆಂಬರಿನಲ್ಲಿ ಹೊಸ ಬಗೆಯ ಭಾರ ಮೂಲಕಣವೊಂದನ್ನು ಪತ್ತೆಮಾಡಿದರು. ಇದನ್ನು ಪ್ಸೈ (ಥಿ) ಎಂದು ಹೆಸರಿಸಲಾಯಿತು. ಪ್ಸೈ ಎಂಬುದು ಅಜ್ಞಾತ ಕಣವೊಂದನ್ನು ಕುರಿತು ಹೇಳುವ ಗ್ರೀಕ್ ವರ್ಣಮಾಲೆಯ ಅಕ್ಷರ. ಈ ಆವಿಷ್ಕಾರವನ್ನು ಕುರಿತು 35 ಮಂದಿ ಬರೆದು ಸಿದ್ಧಪಡಿಸಿದ ಪ್ರೌಢಪ್ರಬಂಧವನ್ನು ಫಿಜಿಕಲ್ ರಿವ್ಯೂ ಲೆಟರ್ಸ್ ಎಂಬ ನಿಯತ ಕಾಲಿಕೆಯಲ್ಲಿ ಪ್ರಕಟಿಸಲಾಯಿತು. ನೂತನ ಶೋಧವೊಂದು ಉಪಪರಮಾಣವಿಕ ಕಣ. ಇದಕ್ಕೆ ಹೇಡ್ರಾನ್ ಎಂಬ ಹೆಸರು ಕೊಡಲಾಯಿತು. ಇದರ ಅರ್ಧಾಯು ಅದರ ವೀಕ್ಷಿತ ರಾಶಿಗಿಂತಲೂ 1000 ಪಟ್ಟು ಹೆಚ್ಚು. ಇದು ನಾಲ್ಕನೆಯ ಬಗೆಯ ಕ್ವಾರ್ಕಿನಿಂದ ಉಂಟಾಗುವುದರಿಂದ ಇದರ ಆವಿಷ್ಕಾರ ಹೆಚ್ಚಿನ ಮಹತ್ತ್ವ ಪಡೆದಿದೆ. ಇವುಗಳ ಗುಣಲಕ್ಷಣಗಳನ್ನು (ಚಾರ್ಮ್) ಕುರಿತು ಷೆಲ್ಡನ್ ಗ್ಲಾಷೋ ಎಂಬ ಭೌತವಿಜ್ಞಾನಿ ವಿವರಣೆಗಳನ್ನು ಒದಗಿಸಿದ್ದಾನೆ.

ಸರಿಸುಮಾರು ಪ್ಸೈ ಮೂಲಕಣದ ಆವಿಷ್ಕಾರವಾಗುವ ವೇಳೆಗೆ ಲಾಂಗ್ ಐಲೆಂಡಿನ ಬ್ರೂಕ್‍ಹೇವನ್ ಪ್ರಯೋಗಾಲಯದಲ್ಲಿ ಸಾಮ್ಯುಯಲ್ ಟಿಂಗ್ (1936) ಎಂಬ ಭೌತವಿಜ್ಞಾನಿ ಸ್ವತಂತ್ರವಾಗಿ ಬೇರೊಂದು ಪ್ರಯೋಗಮಾಡಿ, ಇದೇ ಕಣದ ಇರುವಿಕೆಯನ್ನು ಪತ್ತೆಮಾಡಿದ್ದ. ಈತ ಮತ್ತು ಟಿಂಗ್ ಇಬ್ಬರೂ ಕಲೆತು ತಮ್ಮ ತಮ್ಮ ಆವಿಷ್ಕಾರವನ್ನು ಕುರಿತು ಚರ್ಚಿಸಿದಾಗ ಇತರ ಪ್ರಯೋಗಾಲಯಗಳಿಂದಲೂ ಈ ಬಗ್ಗೆ ಸಮರ್ಥನೆ ಒದಗಿತು. ಟಿಂಗ್ ಹೊಸ ಕಣಕ್ಕೆ ಎ ಕಣ ಎಂದು ಹೆಸರಿಟ್ಟ. ಇದೇ ತೆರನ ಇನ್ನಿತರ ಕಣಗಳ ಆವಿಷ್ಕಾರವಾಗಿ, ಕಣಗಳ ಒಂದು ಕುಟುಂಬವೇ ಒದಗಿಬಂದಂತಾಯಿತು. ಹೀಗಾಗಿ ದ್ರವ್ಯರಚನೆಯನ್ನು ಕುರಿತು ಹೊಸ ಪ್ರಯತ್ನಗಳನ್ನು ಸಂಯೋಜಿಸುವ ಕಾರ್ಯಕ್ಕೆ ಉತ್ತೇಜನ ಲಭಿಸಿತು. ಈ ಕಾರಣ ಈತ ಮತ್ತು ಟಿಂಗ್ ಇಬ್ಬರಿಗೂ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಸಮವಾಗಿ ಹಂಚಲಾಯಿತು (1976). 

ಈತ 1967ರಿಂದಲೂ ಸ್ಟ್ಯಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. 1984ರಲ್ಲಿ ಈತ ಲೀನಿಯರ್ ಆ್ಯಕ್ಸೆಲರೇಟರ್ ಸೆಂಟರಿನ ನಿರ್ದೇಶಕನಾದ. ನ್ಯೂಕ್ಲಿಯರ್ ಸಂಶೋಧನೆಯನ್ನು ಅವಿರತವಾಗಿ ಮುಂದುವರಿಸುತ್ತಿರುವ ಉತ್ಸಾಹಿ ಭೌತವಿಜ್ಞಾನಿ ಈತ.

(ನೋಡಿ- ಕ್ವಾರ್ಕುಗಳು)
(ನೋಡಿ- ಮೂಲಕಣಗಳು)		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						